ಮಂಚೂ
1944 ರಿಂದ 1912ರ ತನಕ ಚೀನವನ್ನಾಳಿದ ಒಂದು ರಾಜ ಮನೆತನ. ಕ್ರಿ. ಶ. 17ನೆಯ ಶತಮಾನದ ಆದಿಭಾಗದಲ್ಲಿ ಮಂಚೂರಿಯದಿಂದ ಬಂದ ಇವರು ಚೀನದಲ್ಲಿ ಮಿಂಗ್ ಆಡಳಿತವನ್ನು ಕೊನೆಗೊಳಿಸಿ ಅಧಿಕಾರಕ್ಕೆ ಬಂದರು. 

ಸುಂಗಾರಿ ಕಣಿವೆಯ ಅರಣ್ಯಭೂಮಿಯಲ್ಲಿ ಕೃಷಿಕರಾಗಿದ್ದ ಮಂಚೂಗಳನ್ನು ನುರ್ಹತ್ಚೆ (1559-1626) ಎಂಬಾತ ಒಂದುಗೂಡಿಸಿ ಅವರಿಗೆ ಸೈನಿಕ ತರಬೇತಿ ನೀಡಿ ಒಂದು ಪ್ರಬಲ ಶಕ್ತಿಯಾಗಿ ರೂಪಿಸಿದ. 1616ರಲ್ಲಿ ಮಂಚೂ ಜನರು ಲಿಯಾವೊತುಂಗ್ ಪ್ರಾಂತದ ಮೇಲೆ ಆಕ್ರಮಣ ನಡೆಸಿ 1621ರಲ್ಲಿ ಮುಡೆಕ್‍ನ್ ಎಂಬ ಊರನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. ಆಗ ಚೀನದ ಬೃಹತ್ ಗೋಡೆಯನ್ನು ದಾಟುವ ಇವರ ಪ್ರಯತ್ನ ಸಫಲವಾಗಲಿಲ್ಲ. ಕೊನೆಯ ಮಿಂಗ್ ಸಾಮ್ರಾಟ ಚುಂಗ್ ಬೆಂಗನ (1627-44) ಕಾಲದಲ್ಲಿ ಲಿಟ್ಜು ಎಂಬ ಬಂಡಾಯಗಾರ ಪೀಕಿಂಗ್ ನಗರದ ಮೇಲೆ ದಾಳಿ ಮಾಡಿದ. 1644ರಲ್ಲಿ ಹತಾಶನಾದ ಮಿಂಗ್ ದೊರೆ ತನ್ನ ಮಗಳನ್ನು ಕೊಂದು ತಾನು ನೇಣು ಹಾಕಿ ಕೊಂಡ. ಸೇನಾನಿ ವುಯೆನ್ ಸೆನ್ ಕ್ವೈಯ್ ಲಿಟ್ಚುವನ್ನು ಓಡಿಸಲು ಮಂಚೂಗಳೊಡನೆ ಒಪ್ಪಂದ ಮಾಡಿಕೊಂಡು ಅವರ ಸಹಾಯ ಕೋರಿದ. ಲಿಟ್ಚು ಪೀಕಿಂಗ್‍ಗೆ ಬೆಂಕಿಹಚ್ಚಿ ಓಡಿಹೋದ. ಮಿಂಗ್ ಸಾಮ್ರಾಜ್ಯದ ಪತನವನ್ನು ಘೋಷಿಸಿದ ಮಂಚೂಗಳು ಘುನ್‍ಚಿ ಎಂಬ ಬಾಲಕನನ್ನು ಪಟ್ಟಕ್ಕೆ ತಂದರು. ಇದೇ ಸುಮಾರಿಗೆ ಉತ್ತರ ಚೀನ ಮಂಚೂ ಪಾಲನೆಗೊಳಪಟ್ಟಿತು. ದಕ್ಷಿಣಚೀನ ಇನ್ನೂ ವಶವಾಗಬೇಕಿತ್ತು. ಈ ಸಮಯದಲ್ಲೇ ಮಿಂಗ್ ಸಾಮ್ರಾಟನೆಂದು ಘೋಷಿತನಾದ ರಾಜಪುತ್ರನೊಬ್ಬ ನಾನ್ನಕಿಂಗ್ ಎಂಬಲ್ಲಿ ಸೋತು ಹತನಾದ. 1651ರಲ್ಲಿ ಕ್ಯಾಂಟನ್ ಮಂಚೂಗಳ ವಶವಾದಾಗ ಚೀನದ ಪ್ರತಿರೋಧ ಕೊನೆಗೊಂಡಂತಾಯಿತು. ಆದರೂ 1657ರಲ್ಲಿ ಮಿಂಗ್ ಸಾಮ್ರಾಜ್ಯಕ್ಕೆ ನಿಷ್ಠನಾಗಿದ್ದ ಕೊಕ್ಷಿಂಗ ನಾನ್ ಕಿಂಗಿಗೆ ಮುತ್ತಿಗೆ ಹಾಕಲು ಯತ್ನಿಸಿ ವಿಫಲನಾಗಿ ಫಾರ್ಮೋಸಾಕ್ಕೆ ಓಡಿಹೋದ. 
ಷುನ್‍ಚಿ ಬಾಲಕನಾಗಿದ್ದಾಗಲೇ ಪಟ್ಟಕ್ಕೆ ಬಂದುದರಿಂದ ರಾಜಪ್ರತಿನಿಧಿಗಳು ಆಡಳಿತ ನಡೆಸುತ್ತಿದ್ದರು. ಈತ ತನ್ನ 15ನೆಯ ವಯಸ್ಸಿನಲ್ಲಿ 1651ರಲ್ಲಿ ಸ್ವತಃ ರಾಜ್ಯವಾಳಲು ನಿರ್ಧರಿಸಿದ. ಈತನ ಪತ್ನಿಯ ಅಕಾಲಮರಣದಿಂದಾಗಿ ಈತ ಕೊರಗಿ 1661ರಲ್ಲಿ ಮೃತನಾದ. 1667ರ ಅನಂತರ ಕಾಂಗ್ ಷಿ ಎಂಬುವನು ಅಧಿಕಾರಕ್ಕೆ ಬಂದ. 1644ರಲ್ಲಿ ಸುಟ್ಟುಹೋಗಿದ್ದ ಪೀಕಿಂಗ್ ನಗರದ ಪುನರ್ ನಿರ್ಮಾಣ ಈತನ ಕಾಲದ ಸಾಧನೆಗಳಲ್ಲೊಂದು. ಸೋತ ಚೀನಿಯರನ್ನು ಸ್ನೇಹ ಸೌಹಾರ್ದದಿಂದ ನಡೆಸಿಕೊಂಡ. ಮಿಷನರಿಗಳ ಸಂಪರ್ಕದಿಂದಾಗಿ ಕಾಂಗ್‍ಷಿಗೆ ಪಾಶ್ಚಾತ್ಯ ಸಾಹಿತ್ಯ ಮತ್ತು ವಿe್ಞÁನಗಳಲ್ಲಿ ಆಸಕ್ತಿ ಬೆಳೆಯಿತು. ಲೇಖಕರಿಗೆ ರಾಜಾಶ್ರಯ ಲಭಿಸಿತು. ಸ್ವತಃ ಲೇಖಕನಾದ ದೊರೆ ಕನ್ ಫೂಷಿಯನ್ನನ ತತ್ತ್ವಗ್ರಂಥಗಳನ್ನು ಮಂಚೂ ಭಾಷೆಗೆ ತರ್ಜಮೆ ಮಾಡಿಸಿದ. ಕುಂಭ ಮತ್ತು ಪಿಂಗಾಣಿ ಕಲೆಗಳು ಈ ಕಾಲದಲ್ಲಿ ಉತ್ಕøಷ್ಟತೆ ಸಾಧಿಸಿದುವು. ಫಾರ್ಮೋಸಾ 1683ರಲ್ಲಿ ಕಾಂಗ್‍ಷಿಯ ವಶವಾಯಿತು. ಮಂಚೂರಿಯದ ಉತ್ತರದಲ್ಲಿ ರಷ್ಯನ್ನರ ವಿಸ್ತರಣೆ ಪ್ರಯತ್ನವನ್ನೂ ಈತ ಸಮರ್ಥವಾಗಿ ತಡೆಗಟ್ಟಿದ. 1722ರಲ್ಲಿ ಈತ ಮೃತನಾಗುವ ತನಕವೂ ಮಂಚೂ ಸಾಮ್ರಾಜ್ಯದ ಘನತೆ ಗೌರವಗಳನ್ನು ರಕ್ಷಿಸಿಕೊಂಡ.

ರಾಜಪುತ್ರ ಯಂಗ್ ಚೆಂಗ್ ಅಧಿಕಾರಕ್ಕೆ ಬಂದ ಮೇಲೆ 1724ರಲ್ಲಿ ಮಿಷನರಿಗಳ ಉಚ್ಚಾಟನೆಗೆ ಆಜ್ಞೆ ಮಾಡಿದ. ಶಾಸ್ತ್ರ ವಿe್ಞÁನಗಳಲ್ಲಿ ಪರಿಣತರಾದ ಕೆಲವೇ ಮಿಷಿನರಿಗಳಿಗೆ ಈತನ ಆಸ್ಥಾನದಲ್ಲಿರುವ ಅವಕಾಶ ದೊರೆಯಿತು. 1735ರಲ್ಲಿ ಈತನ ಮರಣಾನಾಂತರ ಕ್ರಿಯೆನ್ ಲುಂಗ್ ದೊರೆಯಾದ. ಸೈನಿಕ ಜೀವನದಲ್ಲಿ ಆಸಕ್ತಿ ಇರದ ಈತ ಸುಸಂಸ್ಕøತ ವ್ಯಕ್ತಿ ಮತ್ತು ಒಳ್ಳೆಯ ಆಡಳಿತಗಾರ. ಮಿಷನರಿಗಳ ಮೇಲೆ ಹಗೆ ಸಾಧಿಸದಿದ್ದರೂ ಮತಾಂತರವನ್ನು ನಿಷೇಧಿಸಿದ. 1767ರಲ್ಲಿ ಬರ್ಮಾ ಈತನ ಸಾರ್ವಭೌಮತ್ವವನ್ನು ಮಾನ್ಯಮಾಡಿತು. 1796ರಲ್ಲಿ ಈತ ಮೃತನಾದ. 

ಟವೋಕುವಾಂಗ್ (1820-50) ಮತ್ತು ಸಿಯನ್ ಫೆಂಗ್ (1850-61) ಅಸಮರ್ಥ ಹಾಗೂ ಲಂಪಟ ದೊರೆಗಳು. ಇವರ ಕಾಲದಲ್ಲಿ ಸಾಮ್ರಾಜ್ಯ ಭ್ರಷ್ಟಾಚಾರ ಹಾಗೂ ದುರಾಡಳಿತಗಳ ಆಗರವಾಯಿತು. 1850ರಲ್ಲಿ ಆರಂಭವಾದ ತೈಪಿಂಗ್ ದಂಗೆ ಕ್ರಮೇಣ ಎಲ್ಲೆಡೆ ವ್ಯಾಪಿಸಿ ಕೊನೆಗೆ ಮಂಚೂ ಸಂತತಿಯ ಬೇರನ್ನೇ ಅಲುಗಾಡಿಸಿತು. ವೈಟ್ ಲೋಟಸ್ ಸೊಸೈಟಿ, ಸೊಸೈಟಿ ಆಫ್ ಹೆವನ್ ಅಂಡ್ ಅರ್ಥ್ ಮುಂತಾದ ಹಲವು ಭೂಗತ ಸಂಸ್ಥೆಗಳು ಜನರನ್ನು ಬಂಡಾಯವೇಳಲು ಪ್ರಚೋದಿಸುತ್ತಿದ್ದುವು. 1850ರಲ್ಲಿ ದೈವಾರಾಧಕ ಸಂಘದ ಮೇಲೆ ಮಂಚೂ ಸರ್ಕಾರ ನಿಷೇಧ ಹೇರಿದಾಗ ಸಂಘ ಸೈನ್ಯವನ್ನು ಸಂಘಟಿಸಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಿತು. ಕ್ವಾಂಗ್‍ಸಿ ಪ್ರಾಂತದಲ್ಲಿ ಮಂಚೂ ಸೈನ್ಯಕ್ಕೆ ಸೋಲುಂಟಾಯಿತು. ಆದರೆ ಕ್ರಮೇಣ ಸಂಘದ ಸದಸ್ಯರಲ್ಲಿ ಒಗ್ಗಟ್ಟು ಸಡಿಲವಾಗಿ 1863ರಲ್ಲಿ ಮಂಚೂ ಸೈನ್ಯ ನಾನ್‍ಕಿಂಗ್ ನಗರವನ್ನು ಭೀಕರ ಹೋರಾಟದ ತರುವಾಯ ವಶಪಡಿಸಿಕೊಂಡಿತು. 

ತೈಪಿಂಗ್ ದಂಗೆ ಮಂಚೂ ಆಡಳಿತದ ಅಂತ್ಯವನ್ನು ತ್ವರಿತಗೊಳಿಸಿತು. ದಂಗೆಕೋರರು ಪೀಕಿಂಗ್ ಕಡೆ ನುಗ್ಗಿದಾಗ ನಿಂiÀiನ್‍ಫೆಂಗ್ ಅಲ್ಲಿಂದ ಚೆಹೊಲ್ ನಗರಕ್ಕೆ ಪಲಾಯನಮಾಡಿದ ಹಾಗೂ ಅಲ್ಲಿ 1861ರಲ್ಲಿ ಆತ ಮೃತನಾದಾಗ ಆತನ ಮಗ ತುಂಗ್‍ಚಿ ಕೇವಲ ಒಂಬತ್ತು ವರ್ಷದವನಾಗಿದ್ದ. 1873ರ ತನಕ ಇವನ ತಾಯಿ ಮತ್ತು ಚಿಕ್ಕತಾಯಿ ಇಬ್ಬರೂ ರಾಜಪ್ರತಿನಿಧಿಗಳಾಗಿ ರಾಜ್ಯಾಡಳಿತ ನಡೆಸಿದರು. ತುಂಗ್‍ಚಿ ಅರಸನಾದ; ಆದರೆ 1874ರಲ್ಲಿ ಸಿಡುಬಿಗೆ ತುತ್ತಾಗಿ 1875ರಲ್ಲಿ ಮೃತನಾದ. ಅರಸನ ಭ್ರಾತ್ರೀಯನಾದ ಕುವಾಂಗ್‍ಸು ಎಂಬ ಬಾಲಕನನ್ನು ಪಟ್ಟಕ್ಕೇರಿಸಿ ಅವನ ಪರವಾಗಿ ಆಡಳಿತ ನಡೆಯಿತು. ಈತ 1908 ರಲ್ಲಿ ಮೃತನಾದ ಬಳಿಕ ಪುಯಿ ಎಂಬ ಎರಡು ವರ್ಷದ ಮಗುವನ್ನು ಪಟ್ಟಕ್ಕೆ ತರಲಾಯಿತು. ಮಗುವಿಗೆ ತಂದೆ ಮತ್ತು ಕುವಾಂಗ್ ಸೋದರ ಸೈಫೆಂಗ್ ರಾಜಪ್ರತಿನಿಧಿಯಾದ. ಈತ ಚೀನಿಯರನ್ನು ದ್ವೇಷಿಸಿ ಅವರನ್ನು ಉನ್ನತ ಹುದ್ದೆಗಳಿಂದ ತೆಗೆದುಹಾಕಿದ. 1911 ಅಕ್ಟೋಬರಿನಲ್ಲಿ ಹಾಂಕೊವ್ ಮತ್ತು ವುಚಾಂಗ್ ನಗರಗಳಲ್ಲಿ ನಡೆದ ಹೋರಾಟಗಳು ಮಂಚೂ ಆಳ್ವಿಕೆಯ ಅಂತ್ಯಕ್ಕೆ ನಿಮಿತ್ತವಾದವು. 1912 ಫೆಬ್ರವರಿ 12ರಂದು ಪುಯಿ ಪದಚ್ಯುತನಾಗಿ ಚೀನಾ ಗಣರಾಜ್ಯದ ಉದಯವಾಯಿತು. 														
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ